ಬ್ರೇಲ್ ಲಿಪಿ
	ಕುರುಡರು ತಮ್ಮ ವಿದ್ಯಾಭ್ಯಾಸ ಮತ್ತು ವ್ಯವಹಾರಗಳನ್ನು ನಡೆಸಲು ಉಪಯೋಗಿಸುವ ಲಿಪಿ (ಬ್ರೇಲ್‍ಸ್ಕ್ರಿಪ್ಟ್). ಲೂಯಿ ಬ್ರೇಲ್ ಎಂಬಾತನಿಂದ ಉಪಜ್ಞಿಸಲ್ಪಟ್ಟದ್ದರಿಂದ ಈ ಹೆಸರು. ಮಾನವ ತನ್ನ ಭಾವನೆಗಳನ್ನು ಇತರರಿಗೆ ತಿಳಿಸಲು ಭಾಷೆ ಒಂದು ಮಾಧ್ಯಮ. ಭಾಷೆಗೆ ಬರೆವಣಿಗೆ ಮೂಲ ಸಾಧನ. ಪ್ರಪಂಚದಲ್ಲಿ ಪ್ರತಿ ಭಾಷೆಗೂ ತನ್ನದೆ ಆದ ಲಿಪಿ ಇದ್ದು ತನ್ಮೂಲಕ ಬರೆವಣೆಗೆ, ವಿದ್ಯಾಭ್ಯಾಸ ಇತ್ಯಾದಿ ನಡೆಯುತ್ತಿವೆ. ನೇತ್ರಹೀನರಾದವರಿಗೂ ತಮ್ಮ ವಿದ್ಯಾಭ್ಯಾಸ ಮತ್ತು ದೈನಂದಿನ ವ್ಯವಹಾರ ನಡೆಸಲು ಒಂದು ಲಿಪಿಯ ಅವಶ್ಯಕತೆ ಕಾಣಬಂದಿತು. ಈ ಲಿಪಿಯ ಉಪಜ್ಞೆ 1825ರಲ್ಲಾದರೂ ಇದರ ಸಂಸ್ಕರಣದಲ್ಲಿ ಮತ್ತು ಎಲ್ಲ ಭಾಷೆಗಳಲ್ಲಿಯೂ ಇದನ್ನು ಬಳಕೆಗೆ ತರುವಲ್ಲಿ ಒಂದು ಮಹತ್ಸಾಧನೆಯೇ ಅಡಗಿದೆ. ಬ್ರೇಲ್ ಲಿಪಿ ನಡೆದು ಬಂದ ಹಾದಿ ಸುಗಮವಾದುದೇನೂ ಅಲ್ಲ. ಇಂದು ಈ ಲಿಪಿಯಿಂದಾಗಿ ಪ್ರಪಂಚಾದ್ಯಂತ ಕುರುಡರಾದವರು ಒಬ್ಬರೊಡನೊಬ್ಬರು ಪತ್ರವ್ಯವಹಾರ, ಪುಸ್ತಕಗಳ ವಿನಿಮಯ ಮುಂತಾದವನ್ನು ಮಾಡಿಕೊಂಡು ತಮ್ಮ ತಿಳಿವಳಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಲಿಪಿ ಮಾಲೆ ಒಟ್ಟು ಆರು ಚುಕ್ಕೆಗಳ ಸ್ಥಾನಪಲ್ಲಟದಿಂದಾಗಿದೆ. ನೇತ್ರ ಹೀನರು ಸ್ಪರ್ಶದಿಂದ ಓದಿ ಮತ್ತು ಬರೆಯಲು ಅನುಕೂಲಿಸುವಂತೆ ವಿನ್ಯಾಸ ಗೊಂಡಿದೆ.

	ಈ ಲಿಪಿಯ ಉಪಜ್ಞೆಗಿಂತ ಮುಂಚೆ ಕುರುಡರು ತಮ್ಮ ಓದು ಬರಹಗಳಿಗಾಗಿ ತುಂಬ ತೊಂದರೆ ಪಡಬೇಕಾಗಿತ್ತು. ಕೆಲವರು ಉಬ್ಬು ಅಕ್ಷರಗಳನ್ನು ಕಂಡುಹಿಡಿದವರು. ಇದನ್ನು ಓದುವುದು ತುಂಬ ಶ್ರಮದಾಯಕ ಕೆಲಸವಾಗಿತ್ತು. ಬರೆವಣಿಗೆಗೆ ಯಾವ ಸಾಧನವೂ ಇರಲಿಲ್ಲ. ಅಲ್ಲದೆ ಶ್ರಮಸಾಧ್ಯವಾದ ಮತ್ತು ಅಪೂರ್ಣವಾದ ಇನ್ನೂ ಅನೇಕ ರೀತಿಗಳಿಂದ ಕುರುಡರಿಗೆ ಓದು ಬರಹಗಳನ್ನು ಕಲಿಸುವ ಪ್ರಯತ್ನಗಳು ನಡೆದವು. ಆದರೆ ಯಾವುವೂ ಪ್ರಯೋಜನಕ್ಕೆ ಬರಲಿಲ್ಲ. ಲೂಯಿ ಬ್ರೇಲ್ ಎಂಬಾತ ಕುರುಡರಿಗಾಗಿಯೇ ಒಂದು ಲಿಪಿಯನ್ನು ಕಂಡುಹಿಡಿದ. ಕಾರಣಾಂತರಗಳಿಂದ ಬಾಲಕನಾಗಿದ್ದಾಗಲೇ ಕುರುಡನಾದ ಈತ ಆರು ಚುಕ್ಕೆಗಳಿರುವ ಒಂದು ಲಿಪಿಯನ್ನು 1825ರಲ್ಲಿ ಕಂಡುಹಿಡಿದ (ನೋಡಿ- ಬ್ರೇಲ್,-ಲೂಯಿ) ಅಲ್ಲದೆ ಇದರಲ್ಲಿಯೇ ಸಂಗೀತಸ್ವರ ಹಾಗೂ ಗಣಿತ ಸಂಜ್ಞೆಗಳನ್ನು ಸಂಯೋಜಿಸಿದ. ಈತ ತಾನು ಕಲಿತ ಶಾಲೆಯಲ್ಲಿಯೇ ಉಪಾಧ್ಯಾಯನಾಗಿದ್ದು ತಾನು ಕಂಡುಹಿಡಿದ ಲಿಪಿಯನ್ನು ಅಲ್ಲಿಯ ಮಕ್ಕಳಿಗೆ ಕಲಿಸುತ್ತಿದ್ದರೂ ಶಾಲೆಯ ವ್ಯವಸ್ಥಾಪಕ ಮಂಡಲಿಯಿಂದ ಈ ಲಿಪಿಗೆ ಮಾನ್ಯತೆ ದೊರೆತಿರಲಿಲ್ಲ. ಬ್ರೇಲ್ ಮರಣಿಸಿದ ಎರಡು ವರ್ಷಗಳ ಅನಂತರ ಬ್ರೇಲ್ ಲಿಪಿಗೆ ಶಾಲೆ ವ್ಯವಾಸ್ಥಾಪಕ ಮಂಡಲಿಯ ಮತ್ತು ಫ್ರೆಂಚ್ ಸರ್ಕಾರದ ಮಾನ್ಯತೆ ದೊರೆತು ಫ್ರಾನ್ಸಿನ ಕುರುಡರ ಎಲ್ಲ ಶಾಲೆಗಳಲ್ಲಿಯೂ ಬ್ರೇಲ್ ಲಿಪಿಯ ಮೂಲಕ ಶಿಕ್ಷಣ ಕೊಡಲಾರಂಭಿಸಲಾಯಿತು.

	1861ರಲ್ಲಿ ಲಂಡನ್ನಿನಲ್ಲಿಯ ಒಂದು ಅಂಧರ ಶಾಲೆಯಲ್ಲಿ ಬ್ರೇಲ್ ಲಿಪಿಯನ್ನು ಪ್ರಪ್ರಥಮವಾಗಿ ಉಪಯೋಗಿಸಲಾಯಿತು. ಅಂಧ ಆಂಗ್ಲ ವೈದ್ಯ ಟಿ.ಆರ್. ಆರ್ಮಿಟೇಜ್ ಸ್ಥಾಪಿಸಿದ (1868) ಲಂಡನ್ನಿನ ರಾಷ್ಟ್ರೀಯ ಅಂಧರ ಶಾಲೆಗಳಿಗೆ ಸರಬರಾಜು ಮಾಡಲಾಯಿತು.

	ಇಂಗ್ಲಿಷ್ ಭಾಷೆಯಲ್ಲಿ ಬ್ರೇಲ್ ಲಿಪಿ ಅನೇಕ ಎರಡು ತೊಡರುಗಳನ್ನು ಎದುರಿಸಿ 1932ರಲ್ಲಿ ವ್ಯವಸ್ಥಿತ ರೂಪ ತಳೆದು ಸ್ಟಾಂಡರ್ಡ್ ಇಂಗ್ಲಿಷ್ ಬ್ರೇಲ್ ಎಂಬ ಹೆಸರಿಂದ ಪ್ರಪಂಚಾದ್ಯಂತ ಉಪಯೋಗಿಸಲ್ಪಡುತ್ತಿದೆ. 

	ಭಾರತದಲ್ಲಿ 1890ರಿಂದ ಬ್ರೇಲ್ ಲಿಪಿ ನೇತ್ರಹೀನರ ವಿದ್ಯಾಭ್ಯಾಸಕ್ಕಾಗಿ ಬಳಸಲ್ಪಡುತ್ತಿದೆ. ಭಾರತದ ವಿಭಿನ್ನ ಭಾಷೆಗಳಿಗೆ ವಿಭಿನ್ನ ಬ್ರೇಲ್ ಲಿಪಿಗಳನ್ನು ಬಳಸಲಾಗುತ್ತಿತ್ತು. ಇವುಗಳಲ್ಲಿ (1) ಉರ್ದು ಮತ್ತು ಹಿಂದಿ ಭಾಷೆಗಳಿಗೆ-ಷರೀಫ್
		
ಚಿತ್ರ-1

ಬ್ರೇಲ್, (2) ತಮಿಳಿಗೆ-ಅಸ್ಕ್ವಿತ್ ಬ್ರೇಲ್, (3) ಮರಾಠಿ, ಗುಜರಾತಿಗಳಿಗೆ-ನೀಲಕಂಠರಾಯ್ ಬ್ರೇಲ್, (4) ಪೌರಸ್ತ್ಯ ಭಾಷೆಗಳಿಗಾಗಿ-ಓರಿಯಂಟಲ್ ಬ್ರೇಲ್, (5) ಬಂಗಾಳಿ ಭಾಷೆಗೆ-ಷಾ ಬ್ರೇಲ್, (6) ಕನ್ನಡಕ್ಕೆ ನೀಲಕಂಠರಾಯ್ ಬ್ರೇಲನ್ನು ಅನುಸರಿಸಿ ಸಂಸ್ಕರಿಸಲಾದ ಮೈಸೂರು ಬ್ರೇಲ್-ಇವು ಮುಖ್ಯವಾದುವು. ಇವಲ್ಲದೆ ಪ್ರತ್ಯೇಕ ಪ್ರತ್ಯೇಕವಾಗಿ ಕೆಲವು ಶಾಲೆಗಳವರು ತಮ್ಮವೇ ಅದ ಲಿಪಿಗಳನ್ನು ಮಾಡಿಕೊಂಡಿದ್ದರು. ಈ ಲಿಪಿಗಳಲ್ಲಿ ಏಕರೂಪತೆ ಇರಲಿಲ್ಲ. ಒಂದು ಶಾಲೆಯವರು ಬರೆದ ಲಿಪಿಯನ್ನು ಇನ್ನೊಂದು ಶಾಲೆಯವರಿಗೆ ಇಲ್ಲವೇ ಒಂದು ಶಾಲೆಯಲ್ಲಿ ತಯಾರಿಸಿದ ಬ್ರೇಲ್ ಪುಸ್ತಕಗಳನ್ನು ಇನ್ನೊಂದು ಶಾಲೆಯವರು ಓದಲಾಗುತ್ತಿರಲಿಲ್ಲ. ಈ ಕಾರಣದಿಂದ ಕುರುಡರಿಗೆ ತುಂಬ ತೊಂದರೆಯಾಗುತ್ತಿತ್ತು. ಅಲ್ಲದೇ ಅಷ್ಟೊಂದು ಬ್ರೇಲ್ ಪುಸ್ತಕಗಳನ್ನು ಛಾಪಿಸುವುದು ತುಂಬ ತೊಂದರೆಯೂ ಮತ್ತು ವಿಪರೀತ ಖರ್ಚಿನ ಬಾಬ್ತು. ಇದರಿಂದಾಗಿ ಭಾರತಕ್ಕೆಲ್ಲ ಏಕರೂಪವಾದ ಲಿಪಿ ಇರಬೇಕೆಂಬುದರ ಬಗ್ಗೆ ತಜ್ಞರು ಭಾರತ ಸರ್ಕಾರಕ್ಕೆ ಅಹವಾಲು ಮಾಡಿದರು. ಈ ತೊಂದರೆಯನ್ನು ಮನಗಂಡು ಭಾರತ ಸರ್ಕಾರ 1941ರಲ್ಲಿ ಬ್ರೇಲ್ ಲಿಪಿಯ ಏಕರೂಪತೆಗಾಗಿ ಒಂದು ಸಮಿತಿಯನ್ನು ನೇಮಿಸಿತು. ಇದು 1943ರಲ್ಲಿ ತನ್ನ ವರದಿಯನ್ನು ಒಪ್ಪಿಸಿದ್ದಲ್ಲದೆ ಯೂನಿಫಾರಂ ಬ್ರೇಲ್ ಎಂಬ ಲಿಪಿಯನ್ನು ಪರಿಷ್ಕರಿಸಿತು ಕೂಡ. ಆದರೆ ಈ ಲಿಪಿಯಲ್ಲಿಯೂ ಕೆಲವಾರು ದೋಷಗಳಿದ್ದುವು. ಇವನ್ನು ಮನಗಂಡು 1949ರಲ್ಲಿ ಭಾರತ ಸರ್ಕಾರದ ವಿದ್ಯಾ ಇಲಾಖೆಯ ಅಂದಿನ ಜಂಟೀ ಕಾರ್ಯದರ್ಶಿಗಳಾಗಿದ್ದ ಹುಮಾಯೂನ್ ಕಬೀರ್ ಯುನೆಸ್ಕೋದ ಮಹಾನಿರ್ದೇಶಕರಿಗೆ ಒಂದು ಪತ್ರ ಬರೆದು ಬ್ರೇಲ್ ಲಿಪಿಯ ಪ್ರಪಂಚವ್ಯಾಪಿ ಪರಿಷ್ಕರಣ ಮತ್ತು ಭಾರತೀಯ ಭಾಷೆಗಳೆಲ್ಲದಕ್ಕೂ ಏಕ ಲಿಪಿಯಿಂದ ಕೂಡಿದ ಒಂದು ಬ್ರೇಲ್ ಲಿಪಿಯನ್ನು ಅವಿಷ್ಕಾರ ಮಾಡುವ ಬಗ್ಗೆ ಕೋರಿದರು (ಏಪ್ರಿಲ್ 1949). ಯುನೆಸ್ಕೋ ಈ ಸಮಸ್ಯೆಯನ್ನು ಕೂಲಂಕಷವಾಗಿ ಚರ್ಚಿಸಿ ಇದರ ಪರಿಹಾರಕ್ಕೆ ಕ್ಲುಥಾಮೆಕೆಂಜಿ ಅವರು ಮುಖ್ಯಸ್ಥರಾಗಿದ್ದ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿ ವಿವಿಧ ರಾಷ್ಟ್ರಗಳ ವಿದ್ವಾಂಸರೊಂದಿಗೆ ಚರ್ಚಿಸಿ "ಭಾರತೀ ಬ್ರೇಲ್" ಎಂಬ ಸಂಸ್ಕರಿತ ಲಿಪಿಯನ್ನು ಭಾರತದ ಎಲ್ಲ 14 ಮುಖ್ಯ ಭಾಷೆಗಳಿಗೂ ಅನ್ವಯವಾಗುವಂತೆ ಒಪ್ಪಿಸಿತು. (1951).

ಚಿತ್ರ-2

	ಭಾರತೀ ಬ್ರೇಲ್ ಲಿಪಿಯ ಆವಿಷ್ಕಾರ ಭಾರತೀಯ ಬ್ರೇಲ್ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ಆರಂಭಿಸಿತು. ಇದರಿಂದ ಭಾರತದ ಎಲ್ಲ 14 ಮುಖ್ಕ ಭಾಷೆಗಳಿಗೂ ಏಕರೂಪ ಬಂತು. 1952ರಿಂದ ಇದು ಸರ್ವತ್ರ ಬಳಕೆಯಲ್ಲಿದೆ. ಚಿತ್ರ(3).

	ಬ್ರೇಲ್ ಲಿಪಿಯನ್ನು ಶೀಘ್ರವಾಗಿ ಬರೆಯಲು ಅನುಕೂಲವಾಗುವಂತೆ ಬೆರಳಚ್ಚು ಯಂತ್ರಗಳೂ ಇವೆ. ಇದರ ಗಡಿಯಾರದ ಮುಖ ಬಿಲ್ಲೆಯ ಮೇಲೆ ಅಂಕೆಗಳನ್ನು ಬ್ರೇಲ್ ಲಿಪಿಯಲ್ಲಿ ನಮೂದಿಸಿ ಕುರುಡರು ಕಾಲವನ್ನು ತಿಳಿಯಲು ಅನುಕೂಲವಾಗುವಂತೆ ಮಾಡಲಾಗಿದೆ. ಬ್ರೇಲ್ ಭೂಪಟಗಳು ಬ್ರೇಲ್ ಇಂಚು ಪಟ್ಟಿಗಳು ಇತ್ಯಾದಿ ಉಪಕರಣಗಳು ಕುರುಡರಿಗೆ ದೈನಂದಿನ ವಿದ್ಯಾಭ್ಯಾಸದಲ್ಲಿ ತುಂಬ ಸಹಾಯಮಾಡುತ್ತಿವೆ. ಕೆಲವು ಕಾರ್ಖಾನೆಗಳಲ್ಲಿ ನೇತ್ರ ಹೀನರು ಕೆಲಸಮಾಡಲು ಅನುಕೂಲವಾಗುವಂತೆ ಕೆಲವು ಬ್ರೇಲ್ ಮೀಟರುಗಳನ್ನು ಜೋಡಿಸಲಾಗಿದೆ.

	ಪ್ರಪಂಚಾದ್ಯಂತ ಬ್ರೇಲ್ ಮುದ್ರಣಾಲಯಗಳ ಸ್ಥಾಪನೆಯಾಗಿ ಬ್ರೇಲ್ ಪುಸ್ತಕಗಳನ್ನೂ ಬ್ರೇಲ್ ನಿಯತಕಾಲಿಕೆಗಳನ್ನೂ ಮುದ್ರಿಸಿ ನೇತ್ರಹೀನರಿಗೆ ಒದಗಿಸುತ್ತಿವೆ. ಭಾರತದಲ್ಲಿ ಡೆಹರಾಡೂನ್, ದೆಹಲಿ, ಕಲ್ಕತ್ತ, ಮುಂಬಯಿ, ಮದರಾಸು ಮತ್ತು ಮೈಸೂರು ನಗರಗಳಲ್ಲಿ ಬ್ರೇಲ್ ಮುದ್ರಣಾಲಯಗಳಿವೆ.
(ಎಸ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ